ಆಗ ನಾನು ಏಳು ವರ್ಷದವಳಿರಬೇಕು, ಒಂದು ದಿನ ಗೆಳೆಯರ ಗುಂಪು ಹತ್ತಿರದ ಬ್ಯೂಗಲ್ ರಾಕ್ ಕಡೆಗೆ ಹೊರಡಲು ಪ್ಲಾನ್ ಮಾಡಿದ್ರು. ಅಣ್ಣನ ಗೆಳೆಯರದ್ದೆ ದೊಡ್ಡ ಗುಂಪಿತ್ತು ಅವರ ಜೊತೆಗೆ ನಾನು ನನ್ನ ಗೆಳತಿ ಕೂಡ ಹೊರಟೆವು. ನಾ ಯಾವಾಗ್ಲು ಅಣ್ಣನ ಬಾಲವೇ ಅವನು ಎಲ್ಲಿ ಆಡಲು ಹೋದ್ರು ಬೇತಾಳದ ತರಹ ಹಿಂಬಾಲಿಸುತ್ತಿದೆ. ಬೇಸಿಗೆಯ ದಿನಗಾಳಾಗಿದ್ರು ಸಹ ಬ್ಯೂಗಲ್ ರಾಕ್ ತುಂಬಾ ಮರಗಳಿದ್ದಿದ್ರಿಂದ ವಾತವರಣ ತಂಪಾಗಿತ್ತು, ಆದರು ಬಿಸಿಲು, ಮಳೆ, ಚಳಿ ಲೆಕ್ಕಿಸದ ವಯಸ್ಸದು. ಎಲ್ರೂ ಅಲ್ಲಿ ಕಾರ್ಕ್ ಮರಗಳಿಂದ ಬಿದ್ದಿದ್ದೆ ಕಾಯಿಗಳನ್ನು ಆರಿಸಲು ಶುರು ಮಾಡಿದರು. ನಾನು ಕೂಡ ನನ್ನ ಅಣ್ಣನಿಗೋಸ್ಕರ ದೊಡ್ಡ ಕಾಯಿಗಳನ್ನು ಬಂಡೆಯ ಮೇಲೆ ಮತ್ತು ಸುತ್ತ ಮುತ್ತ ಹುಡುಕಿ ಕೊಟ್ಟೆ, ಅವರೆಲ್ಲರು ಕಲೆಹಾಕಿದ್ದ ಕಾಯಿಗಳನ್ನು ಬಂಡೆಯ ಮೇಲೆ ಕಲ್ಲಿನಿಂದ ಕುಟ್ಟಲು ಶುರು ಮಾಡಿದರು. ನಾ ಕುಕ್ಕರಗಾಲಿನಲ್ಲಿ ಕೂತು ಅದನ್ನೆ ಆಶ್ಚರ್ಯವಾಗಿ ನೋಡ್ತಿದ್ದೆ. ಅಣ್ಣನನ್ನು ಮದ್ಯೆ ಮದ್ಯೆ ಇದು ಯಾಕೆ ಹೀಗೆ ಕುಟ್ಟೋದು, ಆಮೇಲೆ ಏನ್ಮಾಡ್ತೀರ ಅಂತ ಪ್ರಶ್ನೆಗಳನ್ನು ಕೇಳ್ತಾನೆ ಇದ್ದೆ. ಅವನು ಒಮ್ಮೆಯು ಬೇಜಾರು ಮಾಡ್ಕೊಳ್ದೆ ನನಗೆ ಉತ್ತರಿಸುತ್ತಾ ಅವನ ಗೆಳೆಯರ ಜೊತೆ ಹರಟುತ್ತ ಕಾಯಿಗಳನ್ನು ಕುಟ್ಟಿ ಉಂಡೆ ಮಾಡಿ ಒಂದು ಬಾಲನ್ನು ತಯಾರಿಸಿಯೇ ಬಿಟ್ಟ. ನನಗೆ ಆಶ್ಚರ್ಯ ಹಾಗು ಖುಷಿ, ಅವನು ಎಷ್ಟು ಜಾಣನಿದ್ದಾನೆ ಎಂಬ ಸಂತೋಷ ಒಂದು ಕಡೆ. ಇದರ ಜೊತೆಗೆ ಒಂದು ಸಣ್ಣ ಆಸೆಯು ಚಿಗುರಿತು, ನಾನು ಆ ತರ ಬಾಲ್ ಮಾಡಬೇಕೆಂದು ಆದರೆ ನನ್ನ ಕೈಯಲ್ಲಿ ಆಗತ್ತ ಗೊತ್ತಿರಲಿಲ್ಲ, ಹಿಂಜರಿಯುತ್ತಲೆ ಅಣ್ಣನನ್ನು ಕೇಳಿದೆ ಅವನು ಸ್ವಲ್ಪ ಕಾಯಿಗಳನ್ನು ನನಗೆ ಕೊಟ್ಟು ಕುಟ್ಟುವಂತೆ ಹೇಳಿದ. ನಾನು ಉತ್ಸಾಹದಿಂದ ಅಲ್ಲಿಯ ನನ್ನ ಪುಟ್ಟ ಕೈಗಳಿಗೆ ಸರಿ ಹೊಂದುವಂತ ಒಂದು ಕಲ್ಲನ್ನು ಹುಡುಕಿ ಕುಟ್ಟಲು ಶುರು ಮಾಡಿದೆ. ಆದರೆ ಅಣ್ಣಾ ಕುಟ್ಟಿದ ರೀತಿಯಲ್ಲಿ ಅದು ಅಷ್ಟು ಸುಲಭವಾಗಿ ಕುಟ್ಟಲು ಆಗ್ಲಿಲ್ಲ, ಕಾಯಿಗಳು ಆ ಕಡೆ ಈ ಕಡೆ ಹೋಗ್ತಿದ್ವು. ನಾನು ಇನ್ನೂ ಉತ್ಸಾಹದಿಂದಲೆ ಮುಂದುವರೆಸಿ ಅಂತೂ ಇಂತೂ ಸ್ವಲ್ಪ ಪುಡಿಮಾಡಿದೆ. ಆದರು ಸ್ವಲ್ಪ ಕಾಯಿಗಳು ಇನ್ನೋ ಪುಡಿಯಾಗದೆ ಉಳಿದಿತ್ತು. ತನ್ನ ಗೆಳೆಯರ ಜೊತೆ ಮಾತಿನಲ್ಲಿ ಮಗ್ನನಾಗಿದ್ದ ಅಣ್ಣ ಬಂದು ನನ್ನ ಕೈಯಿಂದ ಕುಟ್ಟುವ ಕಲ್ಲನ್ನು ತೆಗೆದುಕೊಂಡು ಕಾಯಿಗಳನ್ನು ಚೆನ್ನಾಗಿ ಕುಟ್ಟಿ, ಪುಡಿಗಳನ್ನು ಗುಂಡಗೆ ಮಾಡಿ ಒಂದು ಚಿಕ್ಕ ಬಾಲ್ ತಯಾರಿಸಿ ನನ್ನ ಕೈಗೆ ಕೊಟ್ಟು ಇದನ್ನು ಒಂದು ದಿನ ಒಣಗಲು ಇಡಲು ಹೇಳಿದ. ನನಗೋ ಸಂತೋಷವೊ ಸಂತೋಷ, ಏನೋ ಒಂದು ಸಾಧನೆ ಮಾಡಿಬಿಟ್ಟೆ ಅನ್ನೊ ಖುಶಿ, ಅಣ್ಣನಿಗೆ ಎಷ್ಟೆಲ್ಲಾ ವಿಷ್ಯ ತಿಳಿದಿದೆ ಎಂದು ಆಶ್ಚರ್ಯ ಹಾಗು ನನಗೆ ಅಂತ ಅಣ್ಣನಿದ್ದಾನೆ ಎಂಬ ಜಂಬ. ಅಂದು ತಯಾರಿಸಿದ ಕಾರ್ಕ್ ಬಾಲಿನಲ್ಲಿ ಅಣ್ಣ ಗೆಳೆಯರ ಜೊತೆ ಆಟವಾಡ್ತಿದ್ದ. ನಾನು ಮಾತ್ರ ಅದು ಅಪರೂಪದ ವಸ್ತು ಎಂದು ಜೋಪಾನ ಮಾಡಿಟ್ಟೆ.
ಈಗಲೂ ಬ್ಯೂಗಲ್ ರಾಕ್ ಮುಂದೆ ಹೋದಾಗ ಆ ಬಂಡೆಗಳನ್ನು ನೋಡಿದಾಗ ಆ ಬಾಲ್ಯದ ದಿನಗಳು ನೆನಪಾಗ್ತದೆ.... ಅಣ್ಣ ಮಾಡಿ ಕೊಟ್ಟ ಆ ಬಾಲು ಇಲ್ಲ... ಅಣ್ಣನೂ ಇಲ್ಲ... ಅವನು ಬಿಟ್ಟು ಹೋದ ನೆನಪುಗಳು ಮಾತ್ರ ಇದೆ....