ಬಣ್ಣ ಬಣ್ಣದ ಉಡುಗೆ ತೊಟ್ಟು, ಕೈ ತುಂಬಾ ಬಣ್ಣದ ಬಳೆ ತೊಟ್ಟು, ಜಡೆಗೆ ಹೂ ಮುಡಿದು ತಲೆಯ ಮೇಲೆ ತಂಬಿಟ್ಟಿನ ಆರತಿ ಹೊತ್ತ ಹೆಂಗಸರು ಹಾಗು ಹೆಣ್ಮಕ್ಕಳು ದೇವರ ಮೆರವಣಿಗೆಯ ಮುಂದೆ ನಡೆದು ಹೋಗುತ್ತಿರುವುದು ನೋಡುವುದೇ ನನಗೊಂದು ಸಂಭ್ರಮ. ಆಗಿನ್ನು ಪುಟ್ಟ ಹುಡುಗಿ ನಾನು ಪ್ರಪಂಚ ಇನ್ನೂ ವಿಸ್ಮಯವಾಗಿದ್ದ ಕಾಲ. ಪ್ರತಿ ವರ್ಷ ನಾವಿದ್ದ ಕಡೆ ಊರ ಹಬ್ಬ ನಡಿತಿತ್ತು ಆಗ ಹೊಂಬಾಳೆಯನ್ನು ಸಿಗಿಸಿ, ಮಾವಿನೆಲೆ, ಬಣ್ಣ ಬಣ್ಣದ ಹೂವಿನಿಂದ ಅಲಂಕರಿಸಿದ ತಂಬಿಟ್ಟಿನ ಆರತಿ ಹೊತ್ತವರ ಮೆರವಣಿಗೆ ಬೀದಿಗಳಲ್ಲಿ ಬಳಸಿ ದೇವಸ್ಥಾನದವರೆಗೂ ನಡೆಯುತ್ತಿತ್ತು. ಎಲ್ಲರೂ ಒಟ್ಟಿಗೆ ಸಂತೋಷದಿಂದ ನಡೆಯುವುದು ನೋಡುವುದೇ ಒಂದು ಖುಶಿ. ಪ್ರತಿ ವರ್ಷದಂತೆ ಒಂದು ಭಾನುವಾರದ ಮುಂಜಾನೆ ಆ ವರ್ಷವು ನನ್ನ ಕೆಲವು ಗೆಳತಿಯರು, ನೆರೆಯ ಹೆಂಗಸರು ತಂಬಿಟ್ಟಿನ ಆರತಿಗೆ ಅಣಿ ಮಾಡ್ಕೋತಿದ್ರು, ನಾ ಅಮ್ಮನಲ್ಲಿ ಓಡಿ ಹೋಗಿ 'ಅಮ್ಮಾ ನಾನು ಕೂಡ ಆರತಿ ಎತ್ತ್ಕೊಂಡು ಸಂಜೆ ಅವರ ಜೊತೆ ಮೆರವಣಿಗೆಯಲ್ಲಿ ಹೋಗ್ತೀನಿ' ಎಂದೆ, ಆಗ ಅಮ್ಮ 'ಸುಮ್ನೆ ಅವರು ಮೆರವಣಿಗೆ ಹೋದಾಗ ನಿತ್ಕೊಂಡು ನೋಡು ಸಾಕು' ಎಂದು ಸ್ವಲ್ಪ ಗದರುವ ದನಿಯಲ್ಲಿ ಹೇಳಿದರು. ಅಮ್ಮನಿಗೆ ಗೊತ್ತು ನಾ ಏನಾದ್ರು ಅಪರೂಪಕ್ಕೆ ಕೇಳಿದ್ರೆ ಹಠ ಮಾಡ್ತೀನಿ ಅಂತ. ಅಮ್ಮನ ಗದರಿಕೆಗಿಂತ ಸ್ವಲ್ಪ ಜೋರಾಗಿ ನಾ ಹಠದಿಂದ ಹೋಗಲೇಬೇಕೆಂದು ಅಳಲು ಶುರು ಮಾಡಿದೆ. ಆಗ ಅಮ್ಮ 'ನನಗೆ ತಂಬಿಟ್ಟು ಮಾಡಕ್ಕೆ ಬರಲ್ಲ' ಎಂದು ನನಗೆ ತಿಳುವಳಿಕೆಯ ಮಾತು ಹೇಳಲು ಪ್ರಯತ್ನಿಸಿದರು, ಆದರೂ ನನ್ನ ಗೋಳು ಕಡಿಮೆ ಆಗಲಿಲ್ಲ. ನಮ್ಮ ಮನೆ ಎದುರು ಒಂದು ವಠಾರವಿತ್ತು, ಅಲ್ಲಿ ಒಂದು ಮನೆಯಲ್ಲಿ ಚಿಕ್ಕಮ್ಮ ಎನ್ನುವರು ನನ್ನ ಅಳು ನೋಡಿ ಅಮ್ಮನಲ್ಲಿ ಕಾರಣ ಕೇಳಿದಾಗ ಅಮ್ಮ ನನ್ನ ಅಳುವಿನ ಹಿಂದಿನ ಕಾರಣ ಹೇಳಿದ್ರು.... ಆಗ ಆ 'ಚಿಕ್ಕಮ್ಮ' "ಏ ಮೀನಾ ಅದಕ್ ಯಾಕ್ ಹಾಗೆ
ಅಳ್ತಿ ನಮ್ ಮನೆ ತಂಬಿಟ್ಟಿನ ಆರತಿ ನೀನೆ ತಲೆ ಮ್ಯಾಗೆ ಹೋತ್ಕೊಳುವಂತೆ ಬಿಡು" ಅಂದ್ರು, ಅಮ್ಮನ ಸಮ್ಮತಿಗೂ ಕಾಯದೆ ಮನೆಯೊಳಗೆ ಓಡಿ, ಒಂದು ಬಣ್ಣದ ಲಂಗ ತೊಟ್ಟು, ಸಿಕ್ಕ ಸಿಕ್ಕ ಬಳೆಗಳನ್ನೆಲ್ಲ ಕೈತುಂಬಾ ತೊಟ್ಟು ಹೊರಗೆ ಓಡಿ ಬಂದೆ. ಅಷ್ಟು ಹೊತ್ತಿಗೆ ಆ ವಠಾರದ ನನ್ನ ಬೇರೆ ಗೆಳತಿಯರಿಗೂ ನಾ ತಂಬಿಟ್ಟಿನ ಆರತಿ ಎತ್ತುವ ಸುದ್ದಿ ಮುಟ್ಟಿತ್ತು. ನನ್ನ ಗೆಳತಿಯ ಅಮ್ಮ 'ಬಾ ಜಡೆ ಹಾಕ್ತೀನಿ' ಎಂದು ಕರೆದು ಒಂದು ಜಡೆ ಹಾಕಿ, ಹೂ ಮುಡಿಸಿದರು. ಮತ್ತೇನು ನನಗೆ ಹೇಳಲಾರದಷ್ಟು ಖುಶಿ. ಸಂಜೆ ನಮ್ಮ ಬೀದಿಯ ಮುಂದೆ ದೇವರ ಮೆರವಣಿಗೆ ಬರುವುದೇ ಕಾಯ್ತ ಇದ್ದೆ.... ತಲೆಯ ಮೇಲೆ ತಂಬಿಟ್ಟಿನ ಆರತಿ ಹೊತ್ತು ಆ ಗುಂಪಿನಲ್ಲಿ ನಾನೂ ಒಬ್ಬಳಾಗಿ ನಡೆಯುತ್ತಾ ಜಂಬ ಮಿಶ್ರಿತ ಸಂತೋಷದಿಂದ ಆಗಾಗ ಅಕ್ಕ ಪಕ್ಕ ನಡೆಯುತ್ತಿದ್ದ ನನ್ನ ಗೆಳತಿಯರನ್ನು ನೋಡುತ್ತಾ ನಗು ನಗುತ್ತ ದೇವಸ್ಥಾನದವರೆಗೂ ಹೋದ್ವಿ! ನನ್ನ ಪಕ್ಕ 'ಚಿಕ್ಕಮ್ಮ' ನಡೆದು ಬರ್ತಿದ್ರು, ಅವರ ಮುಖದಲ್ಲಿ ಎಂತಹುದು ಸಮಾದಾನದವಿತ್ತು, ಕಣ್ಣಲ್ಲಿ ಸಂತೋಷವಿತ್ತು. ಆ ತಾಯಿಗೆ ಮಕ್ಕಳಿರಲಿಲ್ಲ ಬಹುಶಃ ಅಂದು ನಾನು ಅವಳ ಮಗಳಾಗಿ ಕಂಡಿರಬೇಕು..... ನನ್ನ ಪುಟ್ಟ ಮನಸಿಗೆ ಅಷ್ಟು ದೊಡ್ಡ ಸಂತೋಷ ಕೊಟ್ಟ ಆ ತಾಯಿಯನ್ನು ನಾ ಆಗಾಗ ನೆನಪಿಸಿಕೊಳ್ತೀನಿ. ನನ್ನ ಹೆತ್ತ ತಾಯಿಯೊಬ್ಬಳೆ ತಾಯಿಯಲ್ಲ, "ಚಿಕ್ಕಮ್ಮ" ನಂತಹ ಎಷ್ಟೊ "ಅಮ್ಮಂದಿರು" ನನಗೆ ತಾಯಿಯಾಗಿದ್ದಾರೆ. ತಂಬಿಟ್ಟು ಎಂದಾಗ 'ಚಿಕ್ಕಮ್ಮ' ನೀ ನೆನಪಾಗುವೆ..... ನೀ ಕೊಟ್ಟ ತಂಬಿಟ್ಟು ಹಾಗು ಸವಿ ನೆನಪು ಇಂದಿಗೂ ನನಗೆ ನೆನಪಿದೆ ಚಿಕ್ಕಮ್ಮ.... ಅಲ್ಲ ಅಮ್ಮಾ!!!!! ಕಲ್ಮಶವಿಲ್ಲದ ಬಾಲ್ಯದ ಅಮ್ಮಂದಿರು!
Saturday, 6 August 2016
ಎದುರು ಮನೆಯ 'ಅಮ್ಮನನ್ನು' ನೆನಪಿಸುವ ತಂಬಿಟ್ಟು
Subscribe to:
Posts (Atom)